ಯಶೋಧರ್ಮನ್
 	ಕ್ರಿ. ಶ. 6ನೆಯ ಶತಮಾನದಲ್ಲಿ ಒಬ್ಬ ದೊರೆ. ಗುಪ್ತರ ಮಾಂಡಲಿಕ. 6ನೆಯ ಶತಮಾನದಲ್ಲಿ ಗುಪ್ತರ ಇಳಿಗಾಲ ಪ್ರಾರಂಭವಾದಾಗ ಭಾರತದಲ್ಲಿ ಹೂಣರು ತಂಡೋಪತಂಡವಾಗಿ ನುಗ್ಗಿ ವಿಧ್ವಂಸಕ ಚಟುವಟಿಕೆಗಳನ್ನು ಆರಂಭಿಸಿದರು. ಆಗ ಗುಪ್ತರ ಅನೇಕ ಸಾಮಂತರು ಸ್ವತಂತ್ರರಾದರು. ಒಗ್ಗಟ್ಟಿಲ್ಲದ ಆ ಕಾಲದಲ್ಲಿ ಹೂಣರನ್ನು ತಡೆಗಟ್ಟುವುದು ಸಾಮಾನ್ಯ ಮಾತಾಗಿರಲಿಲ್ಲ. ಯಶೋಧರ್ಮನ್ ಮೊದಲು ಗುಪ್ತರ ಮಾಂಡಲಿಕನಾಗಿದ್ದರೂ ಅನಂತರ ಸ್ವತಂತ್ರವಾಗಿ ಮಾಳವದ ಅರಸನಾದ. ಹೂಣರನ್ನು ಸೋಲಿಸಿದ ಕೀರ್ತಿ ಇವನಿಗೆ ಸಲ್ಲುತ್ತದೆ. ಮೆಂಡನೂರದ ಶಾಸನ `ಹಿಮಾಲಯದಿಂದ ಮಹೇಂದ್ರ ಪರ್ವತ, ಬ್ರಹ್ಮಪುತ್ರಾದಿಂದ ಪಶ್ಚಿಮ ಸಮುದ್ರದವರೆಗಿದ್ದ ವಿಶಾಲ; ಪ್ರದೇಶಕ್ಕೆ ಇವನು ಒಡೆಯನಾಗಿದ್ದ ನೆಂದು ಹೇಳುತ್ತದೆ. ಹೂಣರ ಅರಸು ಮಿಹಿರಗುಲ ಇವನಿಗೆ ಕಾಣಿಕೆ ಒಪ್ಪಿಸುತ್ತಿದ್ದಂತೆ ತೋರುವುದು. ಈತನ ಅನಂತರ ಸಾಮ್ರಾಜ್ಯ ಬಹುಕಾಲ ಉಳಿಯದೆ ಹೂಣರ ಪ್ರಾಬಲ್ಯ ಪುನಃ ಬೆಳೆಯಿತು.
 (ಜಿ.ಎಸ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ